Chandrachuda Shiva Shankara Parvati Bhajan lyrics in Kannada

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ ||

ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ
ಗಜಚರ್ಮಾಂಬರಧರ ನಮೋ ನಮೋ || ಅ.ಪ ||

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ |
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || 1 ||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ |
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || 2 ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ |
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || 3 ||