Yeke/Eke neenilli pavadiside Bhajan Lyrics in Kannada

|| ಕ್ಷೀರವಾರಿಧಿ ಶಯನ, ಶಾಂತಾಕಾರ ವಿವಿಧ ವಿಚಾರ,
ಗೋಪೀಜಾರ ನವನೀತ ಚೋರ ಚಕ್ರಾಧಾರ ಭವಾದೂರಾ,
ಮಾರಪಿತ ಗುಣಹಾರ ಸರಸಾಕಾರ ರಿಪುಸಂಹಾರ,
ತುಂಬುರು ನಾರದ ಪ್ರಿಯ ವರದ,
ರಕ್ಷಿಸು ನಮ್ಮನು ಅನವರತ. ||

ಏಕೆ ನೀನಿಲ್ಲಿ ಪವಡಿಸಿದೆ
ಜಗದೇಕ ವಿಖ್ಯಾತ ಪಶ್ಚಿಮ ರಂಗಧಾಮ || ಪ ||

ತಮನೊಡನೆ ಹೋರಿ ಬೆಟ್ಟವ ಬೆನ್ನಲಿ ಪೊತ್ತು
ರಮಣಿ ಧರೆಯನು ತಂದ ಆಯಾಸವೋ |
ಅಮರ ವೈರಿಯ ಕರುಳ ಕಿತ್ತಿ ಕಡಿದ ಹತ್ತಿಯೋ
ಕ್ಷಮೆಯ ನಡೆದ ಪಾದ ಕಮಲ ನೊಂದೊವೋ ರಂಗಾ || 1 ||

ಕೊಡವಿ ಪಾಲಕರ ವಂಶವನು ಒಬ್ಬನೆ ಕಡಿದು
ಕೊಡವಿಯನು ಬಿಸುಟಿ ಮಲಗಿದ ಭಾವವೋ |
ಮಡದಿಯನು ಕದ್ದು ಪೋದ ಅಸುರನ ಶಿರವರಿದು
ಬಿಡದೆ ಸಾಸಿರ ಗೋಪರೊಡನೆ ಬಳಲಿದೆಯೋ || 2 ||

ತ್ರಿಪುರದೊಳು ಸತಿಯ ವ್ರತವಳಿದು ಬೆತ್ತಲೆ ನಿಂತು
ಚಪಲತ್ವದಿಂದ ಮಲಗಿದ ಭಾವವೋ |
ಅಪರಿಮಿತ ಭಕ್ತರನು ನೋಡಬೇಕೆಂದೆನುತ
ಸುಪವಿಗ್ರ ತನದಿ ಮಲಗಿದ ಭಾವವೋ || 3 ||

ನಾಲ್ಕುಯುಗವಾದಲ್ಲಿ ಕಡೆಯ ತುರುಗವನೇರಿ
ಸಾಕಾರವಾಗಿ ಮಲಗಿದ ಭಾವಾವೋ |
ಬೇಕಾದ ಸುರ ನರರ ಪಾಲಿಸಲು ಬೇಕೆನುತ
ಆ ಕರುಣದಿಂದ ಮಲಗಿದ ಭಾವವೋ || 4 ||

ಇನ್ನೆಷ್ಟು ಕಾಲದಲಿ ಮೈ ಮರೆದು ಮಲಗಿದರೆ
ನಿನ್ನನೆಬ್ಬಿಸುವವರಾರನು ಕಾಣೆನು |
ಉನ್ನತದ ಕಾಗಿನೆಲೆ ಆದಕೇಶವರಾಯ
ಚೆನ್ನ ಶ್ರೀರಂಗಪಟ್ಟಣದ ರಂಗೇಶಾ || 5 ||