YADAVA NEE BAA Bhajan Lyrics in Kannada

Lyrics :

ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ || ಪ ||

ಸೋದರ ಮಾವನ ಮಥುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ || ಅ.ಪ ||

ಕಣ ಕಾಲಂದುಗೆ ಘಲು ಘಲುರೆನುತಲಿ
ಝುಣ ಝುಣವೇಣುವಿನಾದದಲಿ
ಚಿನ್ನಿಕೋಲು ಚೆಂಡು ಬುಗರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ || 1 ||

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಚರಿತನೆ ಆದಿ ನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೋ || 2 ||

ಖಗ ವಾಹನನೆ ಬಗೆ ಬಗೆಯಿಂದಲಿ
ನಗೆಮೊಗದರಸನೆ ನೀ ಬಾರೋ
ಜಗದಲಿ ನಿನ್ನಯ ಮಹಿಮೆಯ ಪೊಗಳುವೆ
ಪುರಂದರ ವಿಠ್ಠಲ ನೀ ಬಾರೋ || 3 ||